ಘುಂಗ್ರು ಹಂದಿ:

ಗ್ರಾಮೀಣ ರೈತರ ಪಾಲಿನ ಭಾಗ್ಯ ಈ ಸ್ವದೇಶಿ ಹಂದಿಯ ತಳಿಉತ್ತರ ಬಂಗಾಳದಲ್ಲಿರುವ ಘುಂಗ್ರು ತಳಿಯ ಹಂದಿಯು ತನ್ನ ಬಹು ಸಂತಾನೋತ್ಪಾದಕತೆ ಮತ್ತು ಆಹಾರ ಕೊರತೆಯ ಪರಿಸ್ಥಿತಿಗಳಲ್ಲಿಯೂ ಆರೋಗ್ಯಕರವಾಗಿ ಬದುಕುಳಿಯುವ ಸಾಮರ್ಥ್ಯದಿಂದಾಗಿ ಸ್ಥಳೀಯರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಈ ತಳಿಯು ಅಡುಗೆ ಮನೆಯ ತ್ಯಾಜ್ಯ ಪದಾರ್ಥಗಳು ಮತ್ತು ಕೃಷಿ ಉಪಉತ್ಪನ್ನಗಳನ್ನು ಸೇವಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ಮಾಂಸವನ್ನು ಉತ್ಪಾದಿಸುತ್ತದೆ. ಘುಂಗ್ರು ತಳಿಯ ಹಂದಿಗಳು ಹೆಚ್ಚಾಗಿ ಕಪ್ಪು ಬಣ್ಣವನ್ನು ಹೊಂದಿದ್ದು, ಅದರ ಮುಖ ಬುಲ್ ಡಾಗ್ ನಾಯಿಯ ಮುಖದಂತಿರುತ್ತದೆ. ಅದು ಒಂದೇ ಬಾರಿಗೆ 6-12 ಮರಿಗಳನ್ನು ಹಾಕುತ್ತದೆ; ಈ ಮರಿಗಳು ಹುಟ್ಟಿದಾಗಲೇ 1 ಕಿಲೋ ತೂಕ ಹೊಂದಿದ್ದು ಮೊಲೆಹಾಲು ಬಿಡುವ ಹೊತ್ತಿಗೆ 7-10 ಕಿಲೋ ತೂಕದ್ದಾಗುತ್ತವೆ. ಹೆಣ್ಣು ಮತ್ತು ಗಂಡು ಎರಡೂ ಬಹಳ ಸಾಧು ಸ್ವಭಾವ ಹೊಂದಿರುವುದರಿಂದ ಅವುಗಳನ್ನು ಪಳಗಿಸುವುದು ಸುಲಭ. ಅವುಗಳ ಸಾಕಾಣಿಕೆಯ ಸಂದರ್ಭದಲ್ಲಿ ಅವುಗಳನ್ನು ತೋಟಿ ಪದ್ಧತಿಯಡಿಯಲ್ಲಿ ಸಾಕಲಾಗುತ್ತದೆ ಮತ್ತು ಮಳೆಯ ಅಭಾವದಿಂದಾಗಿ ಬೆಳೆ ನೀಡದ ಜಮೀನುಗಳನ್ನು ಹೊಂದಿರುವ ರೈತರ ಪಾಲಿಗೆ ಅವು ವಿಮೆಯಿದ್ದಂತೆ.

ಗುವಾಹತಿಯ ರಾಣಿಯಲ್ಲಿರುವ ರಾಷ್ಟ್ರೀಯ ಹಂದಿ ಸಂಶೋಧನಾ ಕೇಂದ್ರ (ನ್ಯಾಶನಲ್ ರಿಸರ್ಚ್ ಸೆಂಟರ್ ಆನ್ ಪಿಗ್) ದಲ್ಲಿ ಘುಂಗ್ರು ತಳಿಯ ಹಂದಿಗಳನ್ನು ಬಹಳ ಕಾಳಜಿಪೂರ್ವಕವಾಗಿ ಬೆಳೆಸಲಾಗುತ್ತಿದ್ದು, ಅವುಗಳ ಆಹಾರ ಮತ್ತು ನಿರ್ವಹಣೆಯಲ್ಲಿ ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ತಳಿಯ ಅಭಿವೃದ್ಧಿಗಾಗಿ ಅವುಗಳ ಆನುವಂಶಿಕ ಸಾಮರ್ಥ್ಯದ ಮೌಲ್ಯಮಾಪನ ಚಾಲ್ತಿಯಲ್ಲಿದೆ. ಈ ಸ್ವದೇಶಿ ತಳಿಯು ಸಂತಾನೋತ್ಪಾದನೆ ಮತ್ತು ಮಾಂಸೋತ್ಪಾದನೆಯ ದೃಷ್ಟಿಯಿಂದ ತುಂಬ ಫಲದಾಯಕವೆಂದು ಸಾಬೀತಾಗಿದೆ. ರಾಷ್ಟ್ರೀಯ ಹಂದಿ ಸಂಶೋಧನಾ ಕೇಂದ್ರ (ನ್ಯಾಶನಲ್ ರಿಸರ್ಚ್ ಸೆಂಟರ್ ಆನ್ ಪಿಗ್) ದಲ್ಲಿ ಸಾಕಲಾಗುತ್ತಿರುವ ಈ ತಳಿಯ ಹಂದಿಗಳಲ್ಲಿ ಕೆಲವು ಆಯ್ದ ಹಂದಿಗಳು 17 ಮರಿಗಳನ್ನು ಹಾಕಿವೆ. ಈ ಸಂತಾನೋತ್ಪಾದನೆಯ ಪ್ರಮಾಣವು ಇತರ ಘುಂಗ್ರು ಹಂದಿಗಳಿಗಿಂತ ಜಾಸ್ತಿಯಾಗಿದೆ.

ಆಕರ: ಪೋರ್ಟಲ್ ತಂಡ