ಸ್ಥಿಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿ ಮಣ್ಣಿನ ಫಲವತ್ತತೆಯನ್ನು ಸ್ಥಿರವಾಗಿ ಕಾಪಾಡುವುದು. ಮಣ್ಣಿನ ಆರೋಗ್ಯ ಮತ್ತು ಉತ್ಪಾದಕತೆಯನ್ನು ಸವಯವ ಮತ್ತು ಜೈವಿಕ ಗೊಬ್ಬರಗಳ ಬಳಕೆಯಿಂದ ಅಭಿವೃದ್ಧಿಪಡಿಸುವುದು. ಕೀಟ, ರೋಗ ಮತ್ತು ಕಳೆಗಳನ್ನು ಜೈವಿಕ ಹಾಗೂ ಸಸ್ಯಜನ್ಯಗಳ ಬಳಕೆಯಿಂದ ನಿರ್ವಹಣೆ ಮಾಡುವುದು. ಮಾನವ ಮತ್ತು ಜಾನುವಾರುಗಳ ಅವಶ್ಯಕತೆಗನುಗುಣವಾಗಿ ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರವನ್ನು ಉತ್ಪಾದಿಸುವುದು. ಸಮಗ್ರ ಬೆಳೆ ಪದ್ಧತಿಗಳು, ಬೆಳೆ ಪರಿವರ್ತನೆಮ ಅಂತರ ಬೆಳೆಗಳು, ಹೊದಿಕೆ ಬೆಳೆಗಳು ಮತ್ತು ಮಿಶ್ರ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು. ಮಿಶ್ರ ಕೃಷಿ ಅಂದರೆ ಬೆಳೆಗಳ ಉತ್ಪಾದನೆಯ ಜೊತೆಗೆ ಹೈನುಗಾರಿಕೆ, ಕೋಳಿಸಾಕಾಣಿಕೆ, ಇತ್ಯಾದಿ ಉಪ ಕಸುಬುಗಳನ್ನು ಒಳಗೊಂಡಂತೆ ಕೃಷಿಯನ್ನು ಮಾಡುವುದು. ಎಲ್ಲಾ ಕೃಷಿ ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವುದು. ಸಾವಯವ ಕೃಷಿಯ ಮೂಲ ತತ್ವಗಳು ಸುಸ್ಥಿರ ಸ್ವಾವಲಂಬಿ ಬೇಸಾಯ ಪದ್ಧತಿ : ಸಾವಯವ ಕೃಷಿಯಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹಾಗೂ ಭೂಮಿಯಲ್ಲಿರುವ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುವುದು ಹಾಗೂ ಭೂಮಿಯಲ್ಲಿರುವ ಪೋಷಕಾಂಶಗಳ ಲಭ್ಯತೆಯನ್ನು ನಿರಂತರವಾಗಿ ಬಹಳ ಕಾಲದವರೆಗೆ ಕಾಪಾಡುವುದು. ಜೀವನ ವೈವಿಧ್ಯತೆ ಕಾಪಾಡುವುದು : ಆಯಾ ಪ್ರದೇಶ, ಪರಿಸರ ಮಣ್ಣುಗಳಿಗೆ ಅನುಗುಣವಾಗಿ ತಳಿಗಳನ್ನು ಬಳಸಿ ಕೃಷಿ ಮಾಡುವುದರಿಂದ ಸಸ್ಯಗಳ, ಮಾನವ, ಪ್ರಾಣಿ ಸಂಕುಲ, ಸೂಕ್ಷ್ಮಾಣು ಜೀವಿಗಳ ಪ್ರಕೃತಿ ಸಂಬಂಧ ಸಮತೋಲನವನ್ನು ಕಪಾಡಬಹುದು. ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸುವುದು : ನೈಸರ್ಗಿಕವಾಗಿ ದೊರೆಯುವ ವಸ್ತುಗಳ ಸಾವಯವ ಗೊಬ್ಬರ ಹಾಗೂ ಇತರೆ ಕೃಷಿ ತ್ಯಾಜ್ಯಗಳ ಬಳಕೆ, ವಿವಿಧ ಬೆಳೆ ಪದ್ಧತಿಗಳಿಂದ ಮತ್ತು ಮಿಶ್ರ ಕೃಷಿ ಪದ್ಧತಿಗಳ ಅಳವಡಿಕೆಯಿಂದ ಮಣ್ಣಿನ ಫಲವತ್ತತೆ ಮತ್ತು ಉತ್ಪಾದನೆಯನ್ನು ಕಾಪಾಡುವುದರೊಂದಿಗೆ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಸಂರಕ್ಷಿಸಿಕೊಳ್ಳಬಹುದು. ಕೃಷಿ ಸಂಪನ್ಮೂಲಗಳ ಸಂರಕ್ಷಣೆ : ಮಣ್ಣು ಮತ್ತು ನೀರು ಸಂರಕ್ಷಣೆಯಿಂದ ಸವಕಳಿ ತಡೆಗಟ್ಟುವುದರ ಮೂಲಕ ನೈಸರ್ಗಿಕ ಸಂಪನ್ಮೂಲಗಳು ನಶಿಸಿಹೊಗದಂತೆ ಕಾಪಾಡಬಹುದು. ರೋಗ ಹಾಗೂ ಕೀಟಗಳ ನಿರ್ವಹಣೆ : ರೋಗ ನಿರೋಧಕ ತಳಿಗಳ ಬಳಕೆ ಬೆಳೆಗಳ ಪರಿವರ್ತನೆ, ಜೈವಿಕ ಪೀಡೆ ನಾಶಕ, ಪರೋಪಜೀವಿ, ಪರಾವಲಂಬಿ ಜೀವಿ, ಸೂಕ್ಷ್ಮ ಜೀವಿಗಳು, ಜೈವಿಕ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳ ಒಳಕೆಯಿಂದ ಕೀಟ ಮತ್ತು ರೋಗಗಳನ್ನು ತಡೆಗಟ್ಟಿ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು. ಮೂಲ : ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.